ಸೋನಿಯಾ ಗಾಂಧಿ ತ್ಯಾಗಮಯ ಜೀವನ ಹಾಗೂ ರಾಜೀವ್ ಗಾಂಧಿ ಕೊಡುಗೆ:
ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ದುರಂತ ಸಾವುಗಳನ್ನು ಕಣ್ಣಾರೆ ಕಂಡಿದ್ದರೂ ಸೋನಿಯಾ ಗಾಂಧಿಯವರು ಧೃತಿಗೆಡದೆ ದೃಢವಾಗಿ ನಿಂತರು. ಪ್ರಧಾನಿ ಹುದ್ದೆ ಕೈಗೆಟುಕುವಂತಿದ್ದಾಗಲೂ ಅದನ್ನು ವಿನಮ್ರವಾಗಿ ನಿರಾಕರಿಸುವ ಮೂಲಕ ತ್ಯಾಗದ ಮನೋಭಾವ ಪ್ರದರ್ಶಿಸಿದರು ಎಂದು ಖಾದರ್ ಸ್ಮರಿಸಿದರು.
"ವಿರೋಧ ಪಕ್ಷಗಳಿಂದ ನಿರಂತರ ಟೀಕೆ, ಅವಮಾನಗಳು ಎದುರಾದರೂ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೋಫೋರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ವಿರುದ್ಧ ಹಲವು ಆರೋಪ ಮಾಡಲಾಗಿತ್ತು. ಆದರೆ ಇಂದು ದೇಶ ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವಾಗ ಅದೇ ಬೋಫೋರ್ಸ್ ಫಿರಂಗಿಗಳ ಸಾಮರ್ಥ್ಯವನ್ನು ದೇಶವೇ ಹೆಮ್ಮೆಯಿಂದ ಸ್ಮರಿಸುತ್ತಿದೆ."ಸೋನಿಯಾ ಗಾಂಧಿಯವರ ಕುರಿತ ಪುಸ್ತಕದ ಕುರಿತು ಬಿಜೆಪಿಯ ಆಕ್ಷೇಪಣೆಗೆ ತಿರುಗೇಟು ನೀಡಿದ ಅವರು, ಜನರು ಈ ಪುಸ್ತಕವನ್ನು ಓದಿ ಅರ್ಥಮಾಡಿಕೊಳ್ಳುವ ಮೊದಲೇ ಬಿಜೆಪಿ ಗಲಿಬಿಲಿಗೊಂಡಿದೆ. ದೇಶದ ಇತಿಹಾಸ ಹಾಗೂ ಪ್ರಭಾವಿ ನಾಯಕರ ತ್ಯಾಗಮಯ ಜೀವನವನ್ನು ಯುವ ಪೀಳಿಗೆಗೆ ಪರಿಚಯಿಸುವುದು ಈ ಪುಸ್ತಕದ ಉದ್ದೇಶವೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಲಾಭದ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆ ರಾಜಕೀಯ ವೇದಿಕೆಯಲ್ಲ, ಜನರ ಧ್ವನಿ: ವಿಜಯೇಂದ್ರ ಹೇಳಿಕೆಗೆ ತಿರುಗೇಟು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಸಚಿವ ಖಾದರ್, ಜವಾಬ್ದಾರಿಯುತ ನಾಯಕರಾಗಬೇಕಾದರೆ ಶಾಸನಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳಲ್ಲಿ ಭಾಗವಹಿಸುವುದು ಅಗತ್ಯ ಎಂದರು.
"ರೈತರು, ಯುವಕರು ಮತ್ತು ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಸನಸಭೆ ಅಧಿವೇಶನ ಕರೆಯಲಾಗುತ್ತದೆ. ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಬಾರದು ಎಂದು ವಿರೋಧ ಪಕ್ಷಗಳ ನಾಯಕರು ಹೇಳಿದರೆ ರೈತರಿಗೆ ಸೂಕ್ತ ಸಂದೇಶ ರವಾನೆಯಾಗುವುದಿಲ್ಲ. ಶಾಸನಸಭೆಯಲ್ಲಿ ಜನಸಾಮಾನ್ಯರ ಧ್ವನಿಗೆ ಬೆಲೆ ನೀಡದ ನಾಯಕರಿಗೆ ರೈತರು ತಕ್ಕ ಪಾಠ ಕಲಿಸಲಿದ್ದಾರೆ."