ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಗೋಲ್ಡ್ ಲೋನ್ ಗ್ರಾಹಕರಿಗೆ ಬ್ಯಾಂಕ್‌ಗಳು ಮಾರ್ಜಿನ್ ಕಾಲ್ ನೋಟಿಸ್ ನೀಡುತ್ತಿದ್ದು, ಆಭರಣ ಹರಾಜಾಗುವ ಆತಂಕ ಎದುರಾಗಿದೆ.
BENGALURU: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ
ಚಿನ್ನದ ಬೆಲೆ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (NBFC) ಆಭರಣಗಳನ್ನು ಅಡಮಾನವಿಟ್ಟು ಸಾಲ ಪಡೆದ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದೆ. ಚಿನ್ನದ ಮಾರುಕಟ್ಟೆ ಮೌಲ್ಯ ಕಡಿಮೆಯಾದ ಕಾರಣ, ಸಾಲದ ಮೊತ್ತ ಹಾಗೂ ಅಡವಿಟ್ಟ ಚಿನ್ನದ ಮೌಲ್ಯದ ನಡುವಿನ ಅನುಪಾತದಲ್ಲಿ ತೀವ್ರ ವ್ಯತ್ಯಾಸ ಉಂಟಾಗಿದ್ದು, ಬ್ಯಾಂಕ್‌ಗಳು ಗ್ರಾಹಕರಿಗೆ
‘ಮಾರ್ಜಿನ್ ಕಾಲ್’ (Margin Call) ನೋಟಿಸ್ ಜಾರಿಗೊಳಿಸಲು ಆರಂಭಿಸಿವೆ.
ಚಿನ್ನದ ದರ ಇಳಿಕೆಯಿಂದಾಗಿ ಸಾಲದ ಭದ್ರತೆಗೆ ಧಕ್ಕೆಯುಂಟಾಗಿದ್ದು, ಪರಿಸ್ಥಿತಿಯನ್ನು ಸರಿದೂಗಿಸಲು ಗ್ರಾಹಕರು ಹೆಚ್ಚುವರಿ ಚಿನ್ನವನ್ನು ಅಡವಿಡಬೇಕು ಅಥವಾ ಬಾಕಿ ಸಾಲದ ಒಂದು ಭಾಗವನ್ನು ತಕ್ಷಣವೇ ಪಾವತಿಸಿ ಖಾತೆಯನ್ನು ಸರಿದೂಗಿಸಬೇಕು ಎಂದು ಹಣಕಾಸು ಸಂಸ್ಥೆಗಳು ಎಚ್ಚರಿಸುತ್ತಿವೆ.
ಏನಿದು ಮಾರ್ಜಿನ್ ಕಾಲ್ ಮತ್ತು ಎಲ್‌ಟಿವಿ ರೇಷಿಯೋ?:
ಸಾಲ ಪಡೆಯುವಾಗ ಅಡಮಾನ ಇಡುವ ಆಸ್ತಿಯ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಬ್ಯಾಂಕ್ ಎಷ್ಟು ಶೇಕಡಾವಾರು ಸಾಲ ನೀಡುತ್ತದೆ ಎಂಬುದನ್ನು
ಲೋನ್ ಟು ವ್ಯಾಲ್ಯೂ ರೇಷಿಯೋ (LTV) ನಿರ್ಧರಿಸುತ್ತದೆ. ಇದನ್ನು
(ಸಾಲದ ಮೊತ್ತ ÷ ಆಸ್ತಿಯ ಮೌಲ್ಯ) * 100 ಎಂಬ ಸೂತ್ರದ ಮೂಲಕ ಲೆಕ್ಕಹಾಕಲಾಗುತ್ತದೆ. ಬ್ಯಾಂಕ್‌ಗಳು ಎಂದಿಗೂ ಆಸ್ತಿಯ ಶೇ. 100 ರಷ್ಟು ಮೌಲ್ಯಕ್ಕೆ ಸಾಲ ನೀಡುವುದಿಲ್ಲ. ಆದರೆ, ಈಗ ಮಾರುಕಟ್ಟೆಯಲ್ಲಿ ಚಿನ್ನದ ದರ ದಿಢೀರ್ ಕುಸಿದ ಕಾರಣ ಸಾಲದ ಮೊತ್ತಕ್ಕಿಂತ ಅಡವಿಟ್ಟ ಚಿನ್ನದ ಮೌಲ್ಯವೇ ಕಡಿಮೆಯಾಗುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಹಕರ ಮುಂದಿರುವ ಪರ್ಯಾಯ ಮಾರ್ಗಗಳು:
ಬ್ಯಾಂಕ್‌ಗಳಿಂದ ಮಾರ್ಜಿನ್ ಕಾಲ್ ಬಂದ ತಕ್ಷಣ ಗ್ರಾಹಕರಿಗೆ ಮಾರ್ಜಿನ್ ಮೊತ್ತ ಭರಿಸಲು
7 ರಿಂದ 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಎರಡು ಪ್ರಮುಖ ಪರ್ಯಾಯ ಮಾರ್ಗಗಳು ಲಭ್ಯವಿರುತ್ತವೆ:
1. ಸಾಲದ ಅಸಲು ಮೊತ್ತದಲ್ಲಿ ಒಂದಷ್ಟು ಭಾಗವನ್ನು ಪಾವತಿಸಿ ಬಾಕಿ ಸಾಲದ ಪ್ರಸ್ತುತ ಮೌಲ್ಯವನ್ನು ಕಡಿಮೆ ಮಾಡಿಕೊಳ್ಳುವುದು.
2. ಕೊರತೆಯಾಗುವ ಮೌಲ್ಯವನ್ನು ಸರಿದೂಗಿಸಲು ಹಣದ ಬದಲಿಗೆ ಹೆಚ್ಚುವರಿ ಚಿನ್ನದ ಆಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಡುವುದು.
"ಮಾರ್ಜಿನ್ ಮೊತ್ತವು ಪಾವತಿಸುವ ದಿನದಂದು ಚಾಲ್ತಿಯಲ್ಲಿರುವ ಚಿನ್ನದ ಬೆಲೆಯನ್ನು ಆಧರಿಸಿರುತ್ತದೆ. ಗ್ರಾಹಕರು ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲೇ ಪಾವತಿಸಬಹುದು ಅಥವಾ ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು."
ನಿರ್ಲಕ್ಷಿಸಿದರೆ ಅಡವಿಟ್ಟ ಆಭರಣ ಹರಾಜು!:
ನಿಗದಿತ ಗಡುವಿನೊಳಗೆ ಗ್ರಾಹಕರು ಸೂಕ್ತ ಸ್ಪಂದನೆ ನೀಡದಿದ್ದರೆ ನೋಟಿಸ್ ಜಾರಿಗೊಳಿಸಲಾಗುತ್ತದೆ. ಆ ನಂತರವೂ ಸಾಲದ ಖಾತೆಯನ್ನು ಸರಿದೂಗಿಸದಿದ್ದಲ್ಲಿ, ಬ್ಯಾಂಕಿಂಗ್ ನಿಯಮಾವಳಿಗಳ ಪ್ರಕಾರ ಬ್ಯಾಂಕ್‌ಗಳು ಅಡವಿಟ್ಟ ಚಿನ್ನವನ್ನು
ಸಾರ್ವಜನಿಕ ಹರಾಜು (Auction) ಪ್ರಕ್ರಿಯೆಗೆ ಒಳಪಡಿಸಿ ತಮ್ಮ ಸಾಲದ ಹಣವನ್ನು ವಸೂಲಿ ಮಾಡಿಕೊಳ್ಳಲಿವೆ.
ಹೀಗಾಗಿ, ಪ್ರಸ್ತುತ ಗೋಲ್ಡ್ ಲೋನ್ ಪಡೆದಿರುವ ಗ್ರಾಹಕರು ಬ್ಯಾಂಕ್‌ಗಳಿಂದ ಬರುವ ಇಮೇಲ್ ಹಾಗೂ ಎಸ್‌ಎಂಎಸ್ (SMS) ಸಂದೇಶಗಳನ್ನು ನಿರ್ಲಕ್ಷಿಸದೆ, ತಕ್ಷಣವೇ ತಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಸಾಲದ ಖಾತೆಯ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವುದು ಅತ್ಯಗತ್ಯವಾಗಿದೆ.