ಗೃಹ ಲಕ್ಷ್ಮಿ ಯೋಜನೆಯ ಹಣಕ್ಕಾಗಿ 78 ವರ್ಷದ ಅಜ್ಜಿಯನ್ನು ಮೊಮ್ಮಗನೇ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹ ಲಕ್ಷ್ಮಿ' ಯೋಜನೆಯ ಹಣಕ್ಕಾಗಿ 78 ವರ್ಷದ ಅಜ್ಜಿಯನ್ನು ಸ್ವಂತ ಮೊಮ್ಮಗನೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಹಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತಪಟ್ಟವರನ್ನು
ಹಮ್ಮವ್ವ ಬಾಲಪ್ಪ ಸನದಿ ಎಂದು ಗುರುತಿಸಲಾಗಿದೆ.
ನವೆಂಬರ್ 10 ರಂದು ನಾಪತ್ತೆಯಾಗಿದ್ದ ಹಮ್ಮವ್ವ ಅವರ ಮೃತದೇಹ, ಐದು ದಿನಗಳ ನಂತರ ಸಂಜಿನಜಾಲ ಗ್ರಾಮದ ಬಳಿಯ ಅಣೆಕಟ್ಟಿನ ಹಿನ್ನೀರಿನಲ್ಲಿ ಗೋಣಿಚೀಲದಲ್ಲಿ ತುಂಬಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಯಮಕನಮರಡಿ ಪೊಲೀಸರು, ಮೃತರ ಮೊಮ್ಮಗ
ಭೀಮಪ್ಪ ರಾಮಪ್ಪ ಸನದಿ (20) ನನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ ಮತ್ತು ಪೊಲೀಸ್ ತನಿಖೆ:
ಪೊಲೀಸ್ ವರಿಷ್ಠಾಧಿಕಾರಿ
ರಾಮರಾಜನ್ ನೀಡಿದ ಮಾಹಿತಿ ಪ್ರಕಾರ, ಆರೋಪಿಯು ಅಜ್ಜಿಯನ್ನು ದ್ವಿಚಕ್ರ ವಾಹನದಲ್ಲಿ ಪಶ್ಚಾಪುರದ ವಾರದ ಸಂತೆಗೆ ಕರೆದೊಯ್ಯುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ದಾರಿಯಲ್ಲಿ 'ಗೃಹ ಲಕ್ಷ್ಮಿ' ಯೋಜನೆಯಡಿ ಬಂದ ಹಣದಲ್ಲಿ ತನಗೂ ಪಾಲು ನೀಡಬೇಕೆಂದು ಪಟ್ಟು ಹಿಡಿದಿದ್ದಾನೆ. ಅಜ್ಜಿ ಇದಕ್ಕೆ ನಿರಾಕರಿಸಿದಾಗ, ಆಕ್ರೋಶಗೊಂಡ ಆರೋಪಿಯು ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.
ಆರೋಪಿಯು ಕೇವಲ 2,300 ರೂಪಾಯಿಗಾಗಿ ಮತ್ತು ಯೋಜನೆಯ ಹಣದ ಹಂಚಿಕೆಯ ವಿವಾದದಿಂದ ಈ ಕೃತ್ಯ ಎಸಗಿದ್ದಾನೆ. ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ, ನೀರಿನಲ್ಲಿ ತೇಲದಂತೆ ಕಲ್ಲುಗಳನ್ನು ಕಟ್ಟಿ ಅಣೆಕಟ್ಟಿನ ಹಿನ್ನೀರಿಗೆ ಎಸೆದಿದ್ದನು ಎಂದು ಎಸ್ಪಿ ತಿಳಿಸಿದ್ದಾರೆ.
ಕಾನೂನು ಕ್ರಮ:
ಘಟನೆ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಸುದೀರ್ಘ ವಿಚಾರಣೆಯ ನಂತರ ಆರೋಪಿಯು ತನ್ನ ತಪ್ಪೊಪ್ಪಿಕೊಂಡಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಟುಂಬದ ಆರ್ಥಿಕ ನೆರವಿನ ವಿಚಾರದಲ್ಲಿ ನಡೆದ ಈ ದೌರ್ಜನ್ಯವು ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.