ಬೆಳಗಾವಿ ಗಡಿ ವಿಚಾರದಲ್ಲಿ ಮಹಾಜನ ವರದಿ ಅಥವಾ ಯಥಾಸ್ಥಿತಿಯೇ ಅಂತಿಮ ನಿರ್ಣಯವಾಗಿದ್ದು, ಕನ್ನಡಿಗರ ಹಕ್ಕುಗಳನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ: ಮಹಾಜನ ವರದಿ ಅಥವಾ ಯಥಾಸ್ಥಿತಿಯೇ ಕನ್ನಡಿಗರ ಅಂತಿಮ ನಿರ್ಣಯವಾಗಿದ್ದು, ಗಡಿ ವಿಚಾರದಲ್ಲಿ ಯಾರಿಂದಲೂ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ ಗಡಿ ವಿವಾದ, ನೆಲ-ಜಲ-ಭಾಷೆಯ ರಕ್ಷಣೆ ಹಾಗೂ ಮುಂಬರುವ ಸುವರ್ಣ ಸೌಧ ಅಧಿವೇಶನದ ಕುರಿತು UK19 News ಜತೆಗೆ ಮಾತನಾಡಿದ ಅವರು, ನಾಡಿನ ಹಿತಾಸಕ್ತಿಯ ರಕ್ಷಣೆ ನಮ್ಮ ಸರ್ಕಾರದ ಬದ್ಧತೆ ಎಂದಿದ್ದಾರೆ.
ನೆಲ, ಜಲ ಮತ್ತು ಭಾಷೆಯ ಹಕ್ಕುಗಳ ಕುರಿತು ದೃಢ ನಿಲುವು ವ್ಯಕ್ತಪಡಿಸಿದ ಸಚಿವರು, ಗಡಿ ಕನ್ನಡಿಗರ ಪರ ನಿಂತು ಹೋರಾಟ ಮಾಡುತ್ತಿರುವ ಎಲ್ಲಾ ಹೋರಾಟಗಾರರ ಕಾರ್ಯವನ್ನು ಶ್ಲಾಘಿಸಿದರು. ಜಲ ವಿಚಾರದಲ್ಲಿ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ಜಾಗೃತ ಮನಸ್ಸುಗಳು ತಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಅವರು ಕರೆಯು ನೀಡಿದರು.
ಸುವರ್ಣ ಸೌಧದಲ್ಲಿ ನಾಡದೇವಿ ಭುವನೇಶ್ವರಿ ಪುತ್ತಳಿ ಸ್ಥಾಪನೆಗೆ ಒತ್ತು:
ಕನ್ನಡ ಭಾಷೆಗಾಗುತ್ತಿರುವ ಹಿನ್ನಡೆಯನ್ನು ತಡೆಯಲು ಸುವರ್ಣ ಸೌಧದಲ್ಲಿ ಶಾಸಕರಿಗಾಗಿ ವಿಶೇಷ ಕಮ್ಮಟವನ್ನು ಆಯೋಜಿಸಬೇಕು ಎಂದು ಸಚಿವರು ಒತ್ತಾಯಿಸಿದರು. ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ನೆನಪಿಗಾಗಿ ಗಾಂಧಿ ಪ್ರತಿಮೆ ಸ್ಥಾಪಿಸಿದ ಮಾದರಿಯಲ್ಲೇ, ಬೆಳಗಾವಿಯ ಸುವರ್ಣ ಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿ ಪುತ್ತಳಿಯನ್ನು ಅನಾವರಣಗೊಳಿಸಲು ಎಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
"ಬೆಳಗಾವಿ ಅಧಿವೇಶನವು ಕೇವಲ ಪ್ರತಿಭಟನೆಗಳಿಗೋ ಅಥವಾ ಪ್ರದರ್ಶನಕ್ಕೋ ಸೀಮಿತವಾಗಬಾರದು. ಬದಲಾಗಿ, ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ಮಹತ್ವದ ವೇದಿಕೆಯಾಗಬೇಕು." - ಎಚ್.ಕೆ. ಪಾಟೀಲ್, ಸಚಿವ
ಬಸವಣ್ಣನವರ ಕುರಿತ ವಿವಾದಾತ್ಮಕ ಪುಸ್ತಕಕ್ಕೆ ತೀವ್ರ ಖಂಡನೆ:
ಇದೇ ವೇಳೆ ಬಸವಣ್ಣನವರ ಕುರಿತಾದ ವಿವಾದಾತ್ಮಕ ಪುಸ್ತಕ ಹಾಗೂ ಅದರ ಅಪ್ರಬುದ್ಧ ವ್ಯಾಖ್ಯಾನಗಳನ್ನು ಸಚಿವ ಎಚ್.ಕೆ. ಪಾಟೀಲ್ ತೀವ್ರವಾಗಿ ಖಂಡಿಸಿದರು. ನಮ್ಮ ಸರ್ಕಾರವು ಈಗಾಗಲೇ ಬಸವಣ್ಣನವರನ್ನು
'ಸಾಂಸ್ಕೃತಿಕ ನಾಯಕ'ನನ್ನಾಗಿ ಘೋಷಿಸಿದೆ ಎಂದು ಸ್ಮರಿಸಿದ ಅವರು, ಸಂವಿಧಾನದಷ್ಟೇ ಪವಿತ್ರವಾದ ಬಸವಣ್ಣನವರ ತತ್ವ, ಸಿದ್ಧಾಂತ ಮತ್ತು ಅನುಭವ ಮಂಟಪದ ಸಂದೇಶಗಳು ಇಡೀ ಜಗತ್ತಿಗೆ ಎಂದೆಂದಿಗೂ ಮಾರ್ಗದರ್ಶಕವಾಗಿವೆ ಎಂದು ಅಭಿಪ್ರಾಯಪಟ್ಟರು.